ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ತೆರಳಿದ್ದವರ ಮೇಲೆ ಭಾರೀ ದುರಂತ ಸಂಭವಿಸಿದ್ದು, ಒಟ್ಟು 11 ಜನರು ಮೃತಪಟ್ಟಿರುವ ಘಟನೆ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ. ನದಿಯಲ್ಲಿ ಏಕಾಏಕಿ ಸಂಭವಿಸಿದ ಅವಘಡದಿಂದ ಹಲವು ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಈಗಾಗಲೇ 10 ಜನರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು. ಬಳಿಕ ಮಾದೇವ ಬೈರಪ್ಪ ನಾಯ್ಕ್ ಅವರ ಶವವೂ ಪತ್ತೆಯಾಗಿದೆ.
ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ತಟ್ಟೆಹಕ್ಕಲು ನದಿಗೆ ಪ್ರತಿದಿನದಂತೆ ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ನೀರಿನ ಹರಿವು ಹೆಚ್ಚಾಗಿದ್ದ ಕಾರಣ ಹಲವರು ಸಮತೋಲನ ಕಳೆದುಕೊಂಡು ನೀರಿನಲ್ಲಿ ಮುಳುಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು.
ಸಾವನ್ನಪ್ಪಿದವರ ವಿವರ
- ಮಾಲತಿ ಜಟ್ಟಪ್ಪ ನಾಯ್ಕ್ (38)
- ಲಕ್ಷ್ಮೀ ಮಾದೇವ ನಾಯ್ಕ್ (40)
- ಲಕ್ಷ್ಮೀ ಶಿವರಾಮ ನಾಯ್ಕ್ (40)
- ಲಕ್ಷ್ಮೀ ಅಣ್ಣಪ್ಪ ನಾಯ್ಕ್ (50)
- ಉಮೇಶ ಮಂಜುನಾಥ ನಾಯ್ಕ್ (25)
- ಲಕ್ಷ್ಮೀ ಮಾಧೇವ ನಾಯ್ಕ್ (40)
- ಜ್ಯೋತಿ ನಾಗಪ್ಪ ನಾಯ್ಕ್ (38)
- ಮಾಸ್ತಮ್ಮ ಮಂಜುನಾಥ ನಾಯ್ಕ್ (45)
- ಮಾದೇವ ಬೈರಪ್ಪ ನಾಯ್ಕ್ (40)
- ಮಂಜಮ್ಮ ಗೋಯ್ದ ನಾಯ್ಕ್ (30)
- ನಾಗರತ್ನ ಪರಮೇಶ್ವರ ನಾಯ್ಕ್ (38)
ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು
- ಮಾದೇವಿ ಮಂಜುನಾಥ ನಾಯ್ಕ್ (60)
- ಲತಾ ಜಗದೀಶ ನಾಯ್ಕ್ (38)
- ನಾಗರತ್ನ ಈಶ್ವರ ನಾಯ್ಕ್ (40)
ಸ್ಥಳೀಯ ಆಡಳಿತದಿಂದ ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡುವ ಭರವಸೆ ನೀಡಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ನದಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಗ್ರಾಮಸ್ಥರು ಇಂತಹ ದುರಂತಗಳು ಮರುಕಳಿಸದಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.